ಇತಿಹಾಸ

ಗತಕಾಲದ ಘಟನೆಗಳ ಸುವ್ಯವಸ್ಥಿತ ದಾಖಲೆಗಳ ಆಧಾರದ ಮೇಲೆ ಮಾಡಿದ ಸುಸಂಬದ್ಧ ನಿರೂಪಣೆ; ಹಿಂದಿನ ಕಾಲದ ಜನಜೀವನಕ್ಕೆ ಸಂಬಂಧಿಸಿದ ಸಂಗತಿಗಳ ಹಾಗೂ ಅವುಗಳಿಗೆ ಪ್ರೇರಕವಾದ ಶಕ್ತಿ ಪ್ರವೃತ್ತಿಗಳ ಕ್ರಮವಾದ ಹಾಗೂ ವಸ್ತುನಿಷ್ಠವಾದ ವಿವೇಚನೆ.

	ಗತಕಾಲದ ಕಥೆಯೆನ್ನುವುದು ಇತಿಹಾಸವೆಂಬ ಪದದ ಸರಳ ವ್ಯಾಖ್ಯೆ. ಶೋಧನೆಯ ಫಲವಾಗಿ ತಿಳಿದುಬರುವುದೇ ಇತಿಹಾಸ. ಇದು ಈ ಪದದ ಮೂಲ ಅರ್ಥ. ಆದರೆ ಹಿಂದೆ ಏನು ಸಂಭವಿಸಿತೆಂಬುದರ ಅಥವಾ ಸಂಭವಿಸಿರಬಹುದೆಂಬುದರ ಸರಳ ನಿರೂಪಣೆಯಷ್ಟೇ ಇತಿಹಾಸವಲ್ಲ. ಹಿಂದಿನ ಘಟನೆಗಳ ಪರೀಕ್ಷಣ, ವಿಶ್ಲೇಷಣ, ವ್ಯಾಖ್ಯಾನಗಳು ಇತಿಹಾಸದ ಉದ್ದೇಶ. ಮಾನವನೇ ಇದರ ಕೇಂದ್ರ ಬಿಂದು. ಮಾನವನೇನು ಮಾಡಿದನೆಂಬುದನ್ನು ತಿಳಿಸಿ, ತನ್ಮೂಲಕ ಮಾನವನೇನಾಗಿದ್ದಾನೆಂಬುದನ್ನು ತೋರಿಸಿಕೊಡುವುದು ಇತಿಹಾಸದ ಕರ್ತವ್ಯವೆಂಬುದು ಒಬ್ಬ ವ್ಯಾಖ್ಯಾನಕಾರನ ಮತ.

	ಗತಾನುಗತಿಕವಾಗಿ ಆದಿವಾಸಿಗಳು ಅನುಸರಿಸಿಕೊಂಡು ಬಂದ ಪರಂಪರೆಗಳೂ ದಂತಕತೆಗಳೂ ಇತಿಹಾಸದ ಆಕರಗಳಾಗಬಹುದೇ ವಿನಾಃ ಅವುಗಳೇ ಇತಿಹಾಸವಾಗುವುದಿಲ್ಲ. ಮುಂದುವರಿದ ಜನಾಂಗಗಳ ದಾಖಲೆಗಳಾದರೂ ಇತಿಹಾಸದ ವಸ್ತುಗಳೇ ಹೊರತು ಅವೇ ಇತಿಹಾಸವಲ್ಲ. ಪುರಾತನ ಈಜಿಪ್ಟಿಯನ್ನರೂ ಅಸ್ಸಿರಿಯನ್ನರೂ ಚೀನೀಯರೂ ಹೊಂದಿದ್ದ ಲಿಖಿತ ಸಾಮಗ್ರಿಯನ್ನೆಲ್ಲ ಇತಿಹಾಸದ ದೃಷ್ಟಿಯಿಂದ ಸುಸಂಬದ್ಧವೆಂದು ಹೇಳುವುದು ಸಾಧ್ಯವಿಲ್ಲ.

	ಇತಿಹಾಸ ಎಂಬ ಶಬ್ದವನ್ನು ಭಾರತದ ಸಂಸ್ಕøತ ಗ್ರಂಥಗಳಲ್ಲಿ ಒಂದು ವಿಶಿಷ್ಟಾರ್ಥದಲ್ಲಿ ಬಳಸಲಾಗಿದೆ. ಪುರಾಣ, ಇತಿಹಾಸ, ಚರಿತ್ರೆ, ಈ ಮೂರರಲ್ಲಿ ಪುರಾಣವೆಂದರೆ ಹಳೆಯದು. ಇದು ಚರಿತ್ರೆಗಿಂತಲೂ ಹಿಂದಿನದು. ಇದು ಕಂಡದ್ದಲ್ಲ, ಕೇಳಿದ್ದು. ಪ್ರಪಂಚದ ಸೃಷ್ಟಿ, ಸಮುದ್ರಮಥನ, ದೇವಾಸುರ ಯುದ್ಧ ಮುಂತಾದ ಕಥೆಗಳು ಪುರಾಣದ ಜಾತಿಗೆ ಸೇರಿದುವು. ಆದರೆ ಇತಿಹಾಸ ಅಷ್ಟು ಹಳೆಯದಲ್ಲ. ಇತಿ+ಹ+ಆಸ : ಹೀಗೆ ಇತ್ತಂತೆ. ಹೀಗೆ ನಡೆಯಿತಂತೆ ಎನ್ನುವುದು ಇತಿಹಾಸ. ಇದು ಹಿಂದಿನ ಚರಿತ್ರೆ. ಇತಿಹಾಸದಲ್ಲಿ ಪುರಾಣ, ಚರಿತ್ರೆ, ಕಥೆ, ಉದಾಹರಣೆ, ಧರ್ಮಶಾಸ್ತ್ರ, ಅರ್ಥಶಾಸ್ತ್ರಗಳೆಲ್ಲವೂ ಸೇರಿರುತ್ತವೆಂದು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವಿವರಿಸಿದೆ. ಈ ದೃಷ್ಟಿಯಲ್ಲಿ ಮಹಾಭಾರತ ಒಂದು ಇತಿಹಾಸ. ಇದು ವೀರರ ಕಥನ. ಪುರಾಣಿಕರಿಗೆ ಆಧಾರವಾದ ಸಾಮಗ್ರಿಯೆಂದಾಗಲಿ ಸಂಪ್ರದಾಯಗಳೆಂದಾಗಲಿ, ವೀರಕಥನವೆಂಬ ಅರ್ಥದಲ್ಲಿಯಾಗಲಿ ಇತಿಹಾಸವೆಂಬ ಶಬ್ದವನ್ನು ಈ ಲೇಖನದಲ್ಲಿ ಬಳಸಿಲ್ಲ. ಇತಿಹಾಸ ಚರಿತ್ರೆಗಳೆರಡೂ ಪರ್ಯಾಯ ಪದಗಳಾಗಿ ಕನ್ನಡದಲ್ಲಿ ಬಳಕೆಯಲ್ಲಿದ್ದು ಹಾಗೆಯೇ ಇದನ್ನು ಬಳಸಲಾಗಿದೆ.

	ಗತಕಾಲದ ಘಟನೆಗಳ ನಿರೂಪಣೆ ಮಾತ್ರವಲ್ಲದೆ ಗತಕಾಲದ ಘಟನೆಗಳನ್ನೇ ಇತಿಹಾಸವೆನ್ನಲೂಬಹುದು. ಘಟನೆಗಳ ಶೋಧನೆ ಹಾಗೂ ನಿರೂಪಣೆಗಳಷ್ಟಕ್ಕೆ ಮಿತಿಗೊಂಡಿದ್ದ ಈ ಶಬ್ದದ ವ್ಯಾಖ್ಯೆ ಈಚೆಗೆ ವಿಸ್ತಾರವಾಗಿದೆ. ಶೋಧನೆ ನಿರೂಪಣೆಗಳಿಗೆ ವಿಷಯವಾಗಬಹುದಾದ ಘಟನೆಗಳೆಲ್ಲ ಇತಿಹಾಸವೆನಿಸಿಕೊಂಡಿವೆ. ಒಂದು ದೇಶದ ಇತಿಹಾಸದ ಮಾತು ಆಡುವಾಗ ಅದರ ನಿರೂಪಣೆಯೆನ್ನುವ ಅರ್ಥದಲ್ಲೇ ಈ ಮಾತನ್ನು ಬಳಸುವುದಿಲ್ಲ. ರಾಜರುಗಳೂ ರಾಜಕಾರಣಿಗಳೂ ಮಹಾ ವ್ಯಕ್ತಿಗಳೂ ಇತಿಹಾಸ ನಿರ್ಮಾಪಕರೆಂದು ಹೇಳುವುದುಂಟು, ಇವರು ನಿರ್ಮಿಸಿದ ಇತಿಹಾಸವನ್ನು ಬರೆಯುವುದಷ್ಟೆ ಇತಿಹಾಸಕಾರನ ಕೆಲಸವೆಂಬ ಭಾವನೆಯುಂಟು. ಈ ಅರ್ಥದಲ್ಲಿ ಪರಿಭಾವಿಸುವುದಾದರೆ ಇತಿಹಾಸವೆಂದರೆ ಘಟನೆಗಳ ನಿರೂಪಣೆಯಿಲ್ಲ. ಈ ನಿರೂಪಣೆಗೆ ಒಳಪಡುವ ವಸ್ತು. 

	ಇನ್ನೂ ವಿಶಾಲವಾದ ದೃಷ್ಟಿಯಿಂದ ಅವಲೋಕಿಸುವುದಾದರೆ ಮಾನವ ಜೀವನಕ್ಕೆ ಸಂಬಂಧಿಸಿದ ಘಟನೆಗಳು ಮಾತ್ರವಲ್ಲದೆ ಭೌತಜಗತ್ತಿನ ಸಮಸ್ತವೂ ಇತಿಹಾಸದ ವ್ಯಾಪ್ತಿಗೊಳಪಟ್ಟಿವೆ. ಬದಲಾವಣೆಗೊಳ್ಳುವುದೆಲ್ಲವೂ ಇತಿಹಾಸದ ವಸ್ತು. ಬದಲಾವಣೆ ಹೊಂದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲವೆಂಬುದು ವಿಜ್ಞಾನಸಿದ್ಧ ಸತ್ಯವಾದ್ದರಿಂದ ಈ ವಿಶ್ವದಲ್ಲಿರುವ ಪ್ರತಿಯೊಂದಕ್ಕೂ ಒಂದು ಇತಿಹಾಸವಿದ್ದೇ ಇದೆ. ಈ ದೃಷ್ಟಿಯಿಂದ ಎಲ್ಲ ವಿಜ್ಞಾನಗಳೂ ಇತಿಹಾಸದ ಅಂಗಗಳೇ.

	ಇತಿಹಾಸ ದೃಷ್ಟಿಯೆಂದರೆ ಬದಲಾವಣೆಯನ್ನು ಗುರುತಿಸುವ ದೃಷ್ಟಿ. ಈ ದೃಷ್ಟಿಯಲ್ಲಿ ಇಂದಿನವರಿಗೂ ಹಿಂದಿನವರಿಗೂ ಬಹಳ ವ್ಯತ್ಯಾಸವಿದೆ. ಮಾನವನ ಸಮಾಜ ವ್ಯವಸ್ಥೆಯೇ ಅಸ್ಥಿರವಾದದ್ದರಿಂದ ಇದನ್ನು ಹೆಚ್ಚು ಹೆಚ್ಚಾಗಿ ಪರಿವರ್ತಿಸುವುದು ಸಾಧ್ಯವೆಂಬುದೂ ಇಂದು ಅರಿವಾಗಿದೆ. ಈ ಇತಿಹಾಸ ದೃಷ್ಟಿಯೇ ಎಲ್ಲ ಜ್ಞಾನಗಳ ಬೆಳೆವಣಿಗೆಯ ಮೂಲ. ಮಾನವನ ಜ್ಞಾನರಾಶಿ ಬೆಳೆದಷ್ಟೂ ವಿಜ್ಞಾನಿಯ ಕುತೂಹಲ ಬೆಳೆಯುತ್ತಲೇ ಇರುವುದೂ ಹಿಂದೆ ಕಿರಿದಾಗಿದ್ದ ಜ್ಞಾನಕ್ಷೇತ್ರಗಳ ಎಲ್ಲೆಗಳೆಲ್ಲ ವಿಸ್ತರಿಸುತ್ತಿರುವುದೂ ಈ ದೃಷ್ಟಿಯ ಫಲ. ಈ ದೃಷ್ಟಿಯಿಂದ ವೀಕ್ಷಿಸುವುದಾದರೆ ಈ ವಿಶ್ವಕೋಶವೇ ಒಂದು ಇತಿಹಾಸ. ವ್ಯತ್ಯಾಸಗೊಳ್ಳುತ್ತಿರುವ ವಿಶ್ವವ್ಯವಸ್ಧೆಯ ನಿರೀಕ್ಷಣ ಹಾಗೂ ನಿರೂಪಣವೆಂಬ ಖಚಿತ ಅರ್ಥದಲ್ಲಿ ಇತಿಹಾಸವೆಂಬ ಪದವನ್ನು ಇಲ್ಲಿ ಬಳಸಲಾಗಿದೆ.

	ಇತಿಹಾಸದ ದರ್ಶನ, ಲೇಖನ, ಮತ್ತು ಸಾಹಿತ್ಯಗಳನ್ನು ಆಯಾ ಲೇಖನದಲ್ಲಿ ವಿವರಿಸಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ